ಓಡಿ ಬಾರಯ್ಯ ವೈಕುಂಠಪತಿ
ನಿನ್ನ ನೋಡುವೆ ಮನದಣಿಯಾ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮಪುರುಷ ಹರಿ ।।
ಕೆಂದಾವರೆ ಪೋಲ್ವ ಪಾದಗಳಿಂದ ರಂಗ
ಧಿಮಿಧಿಮಿಧಿಮಿಕೆಂದು ಕುಣಿಯುತಲಿ ।
ಅಂದುಗೆ ಕಿರುಗೆಜ್ಜೆ ಘಲಿ ಘಲಿ ಎನ್ನುತಿದೆ
ಅರವಿಂದ ನಯನನೆ ಗೋವಿಂದ ಬಾರೋ ।।
ಕೋಟಿ ಸೂರ್ಯ ಪ್ರಕಾಶದಂತೆ
ಕಿರೀಟ ಕುಂಡಲಿ ಬಾವುಲಿ ಹೊಳೆಯೆ ।
ಲಲಾಟ ಕಸ್ತೂರಿ ತಿಲಕವನಿಡುವೆ
ಗೋಪಾಲರ ಆಟ ಸಾಕೋ ಈಗ ।।
ಮಂಗಳಾತ್ಮಜ ಮೋಹನ ಕಾಯೋ ರಂಗ
ಸಂಗೀತ ಪ್ರೀಯ ಸದ್ಗುಣಶೀಲ ।
ಅಂಗನೆಯರಿಗೆಲ್ಲ ಅತಿ ಪ್ರಿಯನಾದ ಮಂಗಳ
ಮೂರುತಿ ಪುರಂದರ ವಿಠ್ಠಲ ।।
No comments:
Post a Comment