Saturday, 30 November 2019

ಗೋಪಿ ಕೇಳ್ ನಿನ್ನ ಮಗ

ಗೋಪಿ ಕೇಳ್ ನಿನ್ನ ಮಗ ಜಾರ ಅವಚೋರ ಸುಕುಮಾರ ।।

ಮುದದಿ ಮುಕುಂದ ಸದನಕ್ಕೆ ಬಂದ । ದಧಿಯ
ಮೀಸಲು ಬೆಣ್ಣೆ ತಿಂದ ಅವತಿಂದ ನಿನ್ನ ಕಂದಾ ।।

ಮಾರನ ಪಿತ ತಾ ಮನೆಯೊಳು ಹೊಕ್ಕ । ಹಿಡಿಯ
ಹೋದರೆ ಅವ ಸಿಕ್ಕ ಅವನಕ್ಕ ಭಾರಿ ಠಕ್ಕ ।।

ಹರೆಯದ ಪೋರಿ ಜರದ ಕೆಂಗೂರಿ । ಭರದಿಂದ
ಸೀರೆಯ ಸೆಳೆದ ಕರಪಿಡಿದ ಮಾನ ಕಳೆದಾ ।।

ಬಾಳದಿನವಾಯಿತು ಹೇಳುವುದ್ಹಾಂಗೆ । ಗೋಪಾಲನ
ಮನಸು ಒಮ್ಮೆ ಹಾಂಗೆ ಒಮ್ಮೆ ಹಿಂಗೆ । ಹೇಳಲ್ ಹಾಂಗೆ ।।

ರಾಧೆಯ ಮನದ ಮೋದ  ಮುಕುಂದ । ಶ್ರೀದವಿಠ್ಠಲನಾಟ
ಚೆಂದ ನಯನನಂದ ನಿನ್ನ ಕಂದಾ ।।

ನಿನ್ನ ನಂಬಿ ಬಂದೆ

ನಿನ್ನ ನಂಬಿ ಬಂದೆ ಎನ್ನ ಕೈ ಬಿಡಬೇಡ
ಘನ್ನ ಮಹಿಮನೆ ಶ್ರೀನಿವಾಸ ।।

ಪನ್ನಗ ಶಯನ ಪನ್ನ ರಕ್ಷಕ । 
ಪ್ರಸನ್ನನಾಗೋ ಬೇಗ ಶ್ರೀನಿವಾಸ ।।

ಜನನಿ ಜನಕನೆ ಶ್ರೀನಿವಾಸ 
ಎನ್ನನುಭಂಧಿಯು ನೀನೆ ಶ್ರೀನಿವಾಸ ।।
ಜನುಮ ಜನುಮದೊಳು ಶ್ರೀನಿವಾಸ 
ಎನ್ನನುದ್ದರಿಸುವವನೇ ಶ್ರೀನಿವಾಸ ।।

ದೇಶದೇಶವತಿರುಗಿ ಶ್ರೀನಿವಾಸ ಬಹು 
ಕ್ಲೇಶ ಪಟ್ಟಿರುವೆನು ಶ್ರೀನಿವಾಸ ।।
ಆಶಾ ಪಾಶವ ಬಿಡಿಸೋ ಶ್ರೀನಿವಾಸ 
ನಿನ್ನ ದಾಸರ ಸಂಗಕೊಡೋ ಶ್ರೀನಿವಾಸ ।।

ಬಂಧನವ ಕೊಡುವವನೆ ಶ್ರೀನಿವಾಸ 
ಭವ ಬಂಧನವ ಬಿಡಿಸುವವನೆ ಶ್ರೀನಿವಾಸ ।।
ಅಂದು ನೀನೆ ಇಂದು ನೀನೆ ಶ್ರೀನಿವಾಸ 
ಎಂದೆಂದೆ೦ದಿಗೂ ನೀನೆ ಶ್ರೀನಿವಾಸ ।।

ಹೃದಯದಲ್ಲಿ ನಿನ್ನರೂಪ ಶ್ರೀನಿವಾಸ 
ಎನ್ನ ವದನದಲ್ಲಿ ನಿನ್ನ ನಾಮ ಶ್ರೀನಿವಾಸ ।।
ಸದಯನಾಗಿ ಎನಗೆ ಒಲಿದು ಶ್ರೀನಿವಾಸ 
ನೀನು ಒದಗಿ ಬಂದು ಪಾಲಿಸಯ್ಯ ಶ್ರೀನಿವಾಸ ।।

ಜಲ್ಲಡಿಯ ನೆರಳಿನಂತೆ ಶ್ರೀನಿವಾಸ 
ಬಹು ತಲ್ಲಣವಗೊಳಿಸುವವನೆ  ಶ್ರೀನಿವಾಸ ।।
ಬಲ್ಲವರು ಯಾರಯ್ಯ ಶ್ರೀನಿವಾಸ 
ಸಿರಿವಲ್ಲಭನೆ ಎನ್ನ ತಂದೆ ವೆಂಕಟೇಶ ।।