Saturday, 8 August 2020

ಪೋಪು ಹೋಗೋಣ ಬಾ

 ಪೋಪು ಹೋಗೋಣ ಬಾ ರಂಗಯ್ಯ ರಂಗ 

 ಪೋಪು ಹೋಗೋಣ ಬಾ ।।


ಜಾನ್ಹವಿಯ ತೀರವಂತೆ ಜನಕರಾಯನ ಕುವರಿಯಂತೆ 

ಜಾನಕಿ ವಿವಾಹವಂತೆ ಜಾಣ ನೀನು ಬರಬೇಕಂತೆ ।।


ಕುಂಡನೀಯ ನಗರವಂತೆ ಭೀಷ್ಮಕರಾಯನ ಕುವರಿಯಂತೆ 

ಶಿಶುಪಾಲ ನೊಲ್ಲಳಂತೆ ನಿನಗೆ ಓಲೆ ಬರೆದಳಂತೆ ।।


ಕೌರವರು ಪಾಂಡವರು ನೆತ್ತವಾಡಿ ಸೋತರಂತೆ 

ರಾಜ್ಯವನ್ನೆ ಬಿಟ್ಟರಂತೆ ರಂಗವಿಠಲ ಬರಬೇಕಂತೆ ।।


ಸತ್ಯ ಜಗತಿದು ಪಂಚಭೇದವು

 ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ 

ಕೃತ್ಯವರಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ।।

 

ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು 

ಜೀವ ಜಡ ಜಡ ಜಡಕೆ ಭೇದ ಜೀವ ಜಡ ಪರಮಾತ್ಮಗೆ ।।

 

ಮಾನುಷೋತ್ತಮಗಧಿಪ ಕ್ಷಿತಿಪರು ಮನುಜ ದೇವ ಗಂಧರ್ವರು 

ಜ್ಞಾನಪಿತ್ರಜಾನ ಕರ್ಮಜ ದಾನವಾರಿ ತತ್ವಾತ್ಮರು ।।

 

ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣನು 

ಇನಜಗೆ ಸಮ ಸೂರ್ಯ ಚಂದ್ರರು ಮನುಸುತೆಯು ಹೆಚ್ಚು ಪ್ರವಹನು ।।

 

ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಯಾ೦ಭುವರಾರ್ವರು 

ಪಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು ।।

 

ದೇವೇಂದ್ರನಿಗಿಂತ ಅಧಿಕ ಮಹರುದ್ರ ದೇವ ಸಮ ಶೇಷ ಗರುಡರು 

ಕೇವಲಧಿಕರು ಶೇಷಗರುಡಗೆ ದೇವಿ ಭಾರತಿ ಸರಸ್ವತಿ ।।

 

ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು 

ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕಶಕ್ತಳು ಶ್ರೀ ರಮಾ ।।

 

ಅನಂತ ಗುಣದಿ೦ ಲಕುಮಿಗಧಿಕನು ಶ್ರೀಪುರಂದರವಿಠಲನು 

ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ ।।

 

  

ಆರುತಿ ಬೆಳಗೋಣ ಬಾರೇ

ಆರುತಿ ಬೆಳಗೋಣ ಬಾರೇ ಶ್ರೀಹರಿಗೆ ॥

ಆರುತಿ ಬೆಳಗೋಣ ವಾರಿಜ ನಾಭಗೇ

ನಾರಿಯರೆಲ್ಲರೂ ತೀವ್ರದಿ೦ದಲಿ । ಮುತ್ತಿನಾರುತಿ 

ಬೆಳಗೋಣ ಬಾರೇ ॥


ಮತ್ಸ್ಯ ಕೂರ್ಮನಿಗೆ ಸ್ವಚ್ಛವರಹನಿಗೆ ॥

ವತ್ಸ ಪ್ರಹ್ಲಾದನ ಸಲಹಿದ ನರಹರಿಗೆ ॥

 

ಪುಟ್ಟವಾಮನನಿಗೆ ದಿಟ್ಟ ಭಾರ್ಗವನಿಗೆ 

ಶಿಲೆಯನುದ್ಧರಿಸಿದ  ಶ್ರೀ ರಾಮಚ೦ದ್ರಗೇ ॥


ಉಧ್ಭವ ಸಖನಿಗೆ ಮುದ್ದು ಕೃಷ್ಣನಿಗೆ ॥

ಬೌದ್ಧಾವತಾರ ತಾಳ್ದ ಮುದ್ದು ಹಯವದನಗೆ ॥


Saturday, 27 June 2020

ಬೃಂದಾವನದಿ ಕೊಳಲನೂದಲಿಲ್ಲವೇ

ಬೃಂದಾವನದಿ ಕೊಳಲನೂದಲಿಲ್ಲವೇ 
ಅಂದು ಗೋಪಿಯರನ್ನು ಕರೆಯಲಿಲ್ಲವೆ ।।
ಇಂದೇಕೆ ಮರೆತೆಯೋ ಮಾಧವ ರಾಧಮಾಧವ ವೇಣಿ ಮಾಧವ 
ಬಂದು ನೀ ಎನ್ನ ಕಾಯೋ ಕೇಶವ ।।

ನೀರೊಳು ನೀ ಆಟವಾಡಲಿಲ್ಲವೇ 
(ನೀ) ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ 
(ನೀ) ಪೋರನ ಮಾತಿಗೆ ಪೊಗಲಿಲ್ಲವೇ (ಕೃಷ್ಣ) ।।

ಪೊಡವೀಯ ದಾನವ ಬೇಡಲಿಲ್ಲವೇ 
(ನೀ) ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ 
(ನೀ) ಕಡಗೋಲ ಕೈಯಲ್ಲಿ ಪಿಡಿಯಲಿಲ್ಲವೇ (ಕೃಷ್ಣ)।।

ಬತ್ತಲೆ ಬೌದನಾಗಿ ತಿರುಗಲಿಲ್ಲವೇ
(ನೀ) ಉತ್ತಮ ತೇಜಿಯನ್ನೇರಲಿಲ್ಲವೇ ।
ಹತ್ತಾವತಾರವ ತೋರಲಿಲ್ಲವೇ 
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ (ಕೃಷ್ಣ) ।।


ನಿನ್ನ ನಂಬಿ ಬಂದೆ

ನಿನ್ನ ನಂಬಿ ಬಂದೆ ಎನ್ನ ಕೈಬಿಡಬೇಡ ಘನ್ನ 
ಮಹಿಮನೆ ಶ್ರೀನಿವಾಸ ।।

ಪನ್ನಗ ಶಯನ ಪನ್ನ ರಕ್ಷಕ । ಪ್ರಸನ್ನನಾಗೋ 
ಬೇಗ ಶ್ರೀನಿವಾಸ ।।

ಜನನಿ ಜನಕನೆ ಶ್ರೀನಿವಾಸ । ಎನ್ನನುಭಂದಿಯು 
ನೀನೇ ಶ್ರೀನಿವಾಸ ।।
ಜನುಮಜನುಮದೊಳು ಶ್ರೀನಿವಾಸ 
ಎನ್ನನುದ್ಧರಿಸುವವನೇ ಶ್ರೀನಿವಾಸ ।।

ದೇಶದೇಶವತಿರುಗಿ ಶ್ರೀನಿವಾಸ ಬಹು 
ಕ್ಲೇಶ ಪಟ್ಟಿರುವೆನು ಶ್ರೀನಿವಾಸ ।।
ಆಶಾ ಪಾಶವ ಬಿಡಿಸೋ ಶ್ರೀನಿವಾಸ 
ನಿನ್ನದಾಸರ ಸಂಗಕೊಡೋ ಶ್ರೀನಿವಾಸ ।।

ಬಂಧನವ ಕೊಡುವವನೆ ಶ್ರೀನಿವಾಸ 
ಭವ ಬಂಧನವ ಬಿಡಿಸುವವನೆ ಶ್ರೀನಿವಾಸ ।।
ಅಂದು ನೀನೆ ಇಂದು ನೀನೆ ಶ್ರೀನಿವಾಸ 
ಎಂದೆಂದೆಂದಿಗೂ ನೀನೆ ಶ್ರೀನಿವಾಸ ।।

ಹೃದಯದಲ್ಲಿ ನಿನ್ನ ರೂಪ ಶ್ರೀನಿವಾಸ 
ಎನ್ನ ವದನದಲ್ಲಿ ನಿನ್ನ ನಾಮ ಶ್ರೀನಿವಾಸ ।।
ಸದಯನಾಗಿ ಎನಗೆ ಒಲಿದು ಶ್ರೀನಿವಾಸ 
ನೀನು ಒದಗಿ ಬಂದು ಪಾಲಿಸಯ್ಯ ಶ್ರೀನಿವಾಸ ।।

ಜಲ್ಲಡಿಯ ನೆರಳಿನಂತೆ ಶ್ರೀನಿವಾಸ 
ಬಹು ತಲ್ಲಣವಗೊಳಿಸುವವನೆ ಶ್ರೀನಿವಾಸ ।।
ಬಲ್ಲವರು ಯಾರಯ್ಯ ಶ್ರೀನಿವಾಸ 
ಸಿರಿವಲ್ಲಭನೆ ಎನ್ನ ತಂದೆ ವೆಂಕಟೇಶ ।।


Friday, 26 June 2020

ಗೋಪಿ ಕೇಳ್ ನಿನ್ನ ಮಗ

ಗೋಪಿ ಕೇಳ್ ನಿನ್ನ ಮಗ ಜಾರ ಅವ  ಚೋರ ಸುಕುಮಾರ ।

ಮುದದಿ ಮುಕುಂದ ಸದಸದನಕ್ಕೆ ಬಂದ ದಧಿಯ
ಮೀಸಲು ತಿಂದ ಅವತಿಂದ ನಿನ್ನ ಕಂದಾ ।।

ಮಾರನ ಪಿತ ತಾ ಮನೆಯೊಳು ಹೊಕ್ಕ ಹಿಡಿಯ |
ಹೋದರೆ ಆವ ಸಿಕ್ಕ ಅವನಕ್ಕ ಭಾರಿ ಠಕ್ಕ ।।

ಹರೆಯದ ಪೋರಿ ಜರದ ಕೆಂಗೋರಿ । ಭರದಿಂದ 
ಸೀರೆಯ ಸೆಳೆದ ಕರಪಿಡಿದ ಮಾನ ಕಳೆದಾ ।।

ಭಾಳದಿನವಾಯಿತು ಹೇಳುವುದ್ಹಾ೦ಗೆ । ಗೋಪಾಲನ 
ಮನಸು ಒಮ್ಮೆ ಹಾಂಗೆ ಒಮ್ಮೆ ಹಿಂಗೆ । ಹೇಳಲಾಹ್೦ಗೆ ।।

ರಾಧೆಯ ಮನದ ಮೋದ ಮುಕುಂದ । ಶ್ರೀದವಿಠ್ಠಲನಾಟ 
ಚೆಂದ ನಯನನಂದ ನಿನ್ನ ಕಂದಾ ।।



Monday, 27 April 2020

ರಾಘವೇಂದ್ರ ಗುರು ರಾಯರ ಸೇವಿಸಿರೋ

ರಾಘವೇಂದ್ರ ಗುರು ರಾಯರ ಸೇವಿಸಿರೋ । ಸೌಖ್ಯದಿ ಜೀವಿಸಿರೋ
ತುಂಗಾ ತೀರದಿ ರಘುರಾಮನ ಪೂಜಿಪರೋ । ನರಸಿಂಗನ ಭಜಕರೋ

ಶ್ರೀಸುಧೀಂದ್ರಕರ ಸರೋಜ ಸಂಜಾತ । ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ ದುರ್ಮತವನು ಜೈಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ  ಕರುಣೀ ।।

ಕು೦ದದ ವರಮಂತ್ರಾಲಯದಲ್ಲಿರುವ । ಕರೆದಲ್ಲಿಗೆ ಬರುವ
ವೃಂದಾವನ ಗತ ಮೃತ್ತಿಗೆ ಜಲಪಾನಾ । ಮುಕ್ತಿಗೆ ಸೋಪಾನ
ಸಂದರುಶನ ಮಾತ್ರದಲ್ಲಿ ಮಹತ್ಪಾಪ ಪರಿದೋಡಿಸಲಾಪ
ಮಂದಭಾಗ್ಯರಿಗೆ ದೊರಕದಿರುವ ಸೇವಾ ಶರಣರ ಸಂಜೀವಾ ।।

ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸುವ ಮಾತ್ರ
ಮೋದ ಬಡಿಸುತಿಹ ತಾನಿಹ ಪರದಲ್ಲಿ ಈತಗೆ ಸರಿ ಎಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿ ಯೆಲ್ಲೆನ್ನಾಣೆ
ಪಾದಸ್ಮರಣೆಯ ಮಾಡದವನೇ ಪಾಪಿ ನಾ ಪೇಳ್ವೆನು ಸ್ಥಾಪಿ ।।

ಸ್ವಾಮಿ ಲಾಲಿ ಭಕ್ತ ಪ್ರೇಮ ಲಾಲಿ

ಸ್ವಾಮಿ  ಲಾಲಿ ಭಕ್ತ ಪ್ರೇಮ ಲಾಲಿ
ಕಾಮದೆನಿಪ ಗುರು ಸಾರ್ವಭೌಮ ಲಾಲಿ ।।

ಇಂದ್ರ ಲಾಲಿ ರಾಘವೇಂದ್ರ ಲಾಲಿ
ಸಾಂದ್ರ ಭಕ್ತ ಕುಮುದ ಪೂರ್ಣಚಂದ್ರ ಲಾಲಿ ।।

ತರುಣಿ ಲಾಲಿ ನಿಜ ಕರುಣಿ ಲಾಲಿ
ಶರಣ ಜನರ ಕಾವೊ ಗುಣಪೂರ್ಣ ಲಾಲಿ ।।

ದೇವ ಲಾಲಿ ನಿಜ ಭಾವ ಲಾಲಿ
ಭಾವಿಸುವರ ನಿತ್ಯ ನೀ ಕಾವ ಲಾಲಿ ।।

ರಾಜ ಲಾಲಿ ಕಲ್ಪಭೋಜ ಲಾಲಿ
ರಾಜಿಸುವ ಯತಿಕುಲತೇಜ ಲಾಲಿ ।।

ದಾತ ಲಾಲಿ ನಿಜ ತಾತ ಲಾಲಿ
ಪ್ರೀತ ಗುರುಜಗನ್ನಾಥ ವಿಠ್ಠಲ ಲಾಲಿ ।।

ಬಾರೋ ವೆಂಕಟೇಶ

ಬಾರೋ ವೆಂಕಟೇಶ ಮನೆಗೆ ಬಾರೋ ಶ್ರೀನಿವಾಸ
ತೊಡೆಯಲಿಟ್ಟು ಮುದ್ದು ಕೊಟ್ಟು ಹಾಲು ಸಕ್ಕರೆ
ಸಹಿತವಾಗಿ ಪುಟ್ಟ ಬಟ್ಟಲೊಳಗೆ ನಿನಗೆ
ಹೊಟ್ಟೆ ತುಂಬ ಹಾಲು ಕೊಡುವೆ ।।

ಸಣ್ಣನಾಮ ಹಣೆಯಲ್ಲಿ ಹೊಳೆಯುತಾ
ಶಂಖಚಕ್ರ ಪದ್ಮ ಕಿರೀಟವ ತೋರುತ
ವಾಮಭಾಗದಲ್ಲಿ ಲಕ್ಷ್ಮಿ ದೇವಿಯೊಡನೆ ಸರಸವಾಡುತ
ಅಮ್ಮ ಬಹಳ ಹಸಿವೆಯೆಂದರೆ
ಹೊಟ್ಟೆ ತುಂಬಾ ಹಾಲು ಕೊಡುವೆ ।।

ಚಿನ್ನಿ ಕೋಲು ಚೆಂಡನಾಡುತ ಗೆಳೆಯರೊಡನೆ
ಗೊಲ್ಲನಾಗಿ ಗೋವು ಕಾಯುತ
ಕಾಲು ಪಟ್ಟೆ ಕಾಲಲುಟ್ಟು ತುಳಸಿ ಮಾಲೆ ಕೊರಳ ಧರಿಸಿ
ನಿಮ್ಮ ಪಾದ ಮುಂದಕಿಟ್ಟು
ಎನ್ನ ಮೇಲೆ ಚಿತ್ತವಿಟ್ಟು ।।

ಬಾಲರಿಲ್ಲದ ಬಂಜೆಯೆನುವರೋ ಎನ್ನ ಜನ
ಬಾಲರನ್ನು ಪಡೆದ ಜಾಣರು
ಹಸುಳೆ ಇಲ್ಲದೆ ಬಹಳವಾಗಿ ವ್ಯಸನದಿಂದ ಕಾಲ ಕಳೆದೆ
ಶಿಶುವಾಗಿ ತೋರಿ ಬ೦ದ
ಶೇಷಗಿರಿಯ ಶ್ರೀನಿವಾಸ ।।




ಮೂರು ನಾಮಗಳ ಧರಿಸಿದ ಕಾರಣವೇನು

ಮೂರು ನಾಮಗಳ ಧರಿಸಿದ ಕಾರಣವೇನು
ಸಾರಿ ಪೇಳೆಲೊ ಈಗಲೆ ।।

ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರು ನಿನಗೆ ಮೂರು ನಾಮಗಳ ।।

ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು
ಶುದ್ಧ ಪಾದಕೆ ಎರಗಿ ಕರವ ಮುಗಿದು
ಎದ್ದು ನೋಡಲು ನಿನ್ನ ಪಣಿಯೋಳಿಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ ।।

ಸಾಲದೆ ನಿನ್ನ ಸೌಂದರ್ಯಕ್ಕೊಂದು ತಿಲಕ
ಪಾಲಸಾಗರ ಶಾಯಿ ಚೆಲುವಮೂರ್ತಿ
ಕಾಲಕಾಲಕೆ ಬರುವ ಭಕುತಜನಗಳ ವೃಂದ
ದೃಷ್ಟಿತಾಕುವುದೆಂಬ ತೋರುವ ಬಗೆಯೂ ।।

ಮೂರು ಲೋಕಗಳಿಹವು ಮೂರುರೂಪನು ನಾನು
ಮೂರು ಮಾಳ್ಪೆನು ಜಗವ ಮೂರು ಗುಣದಿ
ಮೂರು ತಾಪವ ಗೆದ್ದು ಮಾರ್ಗದಿ ಭಜಿಪೆ
ಪಾರು ಮಾಡುವೆನೆಂದು ತೋರುವ ಬಗೆಯೂ ।।

ಮೂರೆರಡು ಎರಡೆರಡು ಇಂದ್ರಿಯ ವರ್ಜಿಸಲು
ತೋರುವನು ನಿಜರೂಪ ಭಕ್ತಗೆಂದು
ಸಾರುತಿದ್ದರು ವಾಯು ಅರಿಯದೆ ಭಜಿಸಿದಗೆ
ಮೂರುನಾಮಗಳೆ ಗತಿ ಎನ್ನುವ ಬಗೆಯೂ ।।

ಶ್ರೀಲೋಲಕೃಷ್ಣ ಗೋಪಾಲವಿಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೋ
ವ್ಯಾಳಶಯನ ವೆಂಕಟೇಶ ಎನ್ನ ಮನಕೆ
ಕಾಲಕಾಲಕೆ ನಿನ್ನ ಲೀಲೆಗಳ ತೋರೊ ।।






ತಾಳುವಿಕೆಗಿಂತ ತಪವು ಇಲ್ಲ

ತಾಳುವಿಕೆಗಿಂತನ್ಯ ತಪವು ಇಲ್ಲ
ಇದ ಕೇಳಬಲ್ಲವರಿಗೆ ಪೇಳುವೆನು ಸೊಲ್ಲ ।।

ದುಷ್ಟಮನುಜರು ನುಡಿವ ನಿಷ್ಠುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು
ನೆಟ್ಟಸಸಿ ಫಲಬರುವಾತನಕ ಶಾಂತಿಯ ತಾಳು
ಕಟ್ಟು ಬುಟ್ಟಿಯ ಮುಂದೆ ಉಣಲುಂಟು ತಾಳು ।।

ಹಳಿದು ಹಂಗಿಸುವ ಹಗೆಯ ಮಾತನು ತಾಳು
ಸುಳಿನುಡಿ ಕುಹಕ ಕುಮಂತ್ರವ ತಾಳು
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಲಿ ತಾಳು ।।

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು
ಉಕ್ಕೋಹಾಲಿಗೆ ನೀರ ಇಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು ।।



ಕರುಣಿಸೋ ರಂಗ

ಕರುಣಿಸೋ ರಂಗ ಕರುಣಿಸೋ
ಇರುಳು ಹಗಲು ನಿನ್ನ ಸ್ಮರಣೆ ಒದಗುವಂತೆ

ರುಕುಮಾ೦ಗದನಂತೆ ವ್ರತವ ನಾನರಿಯೆ
ಶುಕ ಮುನಿಯಂತೆ ಸ್ತುತಿಸಲರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೇ

ಬಲಿಯಂತೆ ದಾನವ ಕೊಡಲಾರಿಯೇ ಕೃಷ್ಣಾ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹಿಕೊಳ್ಳೋ ಪುರಂದರ ವಿಠ್ಠಲ ।। 

Saturday, 25 April 2020

ಕಂಗಳಿದ್ಯಾತಕೋ ಕಾವೇರಿರಂಗನ ನೋಡದ

ಕಂಗಳಿದ್ಯಾತಕೋ ಕಾವೇರಿರಂಗನ ನೋಡದ ।।

ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀ ಪಾದಂಗಳ ನೋಡದ ।।

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ನೋಡದ ।।

ಹರಿಪಾದೋದಕ ಸಮ ಕಾವೇರಿ
ವಿರಜಾನದಿಲಿ ಸ್ನಾನವ ಮಾಡಿ
ಪರಮ ವೈಕುಂಠ ರಂಗ ಮಂದಿರ
ಪರವಾಸುದೇವನ ನೋಡದ ।।

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ
ತೇರನೇರಿ ಬೀದಿಲಿ ಬರುವ
ರಂಗವಿಠಲ ರಾಯನ ನೋಡದ ।।




ಬಿಡೆನೋ ನಿನ್ನಂಘಿೃ ಶ್ರೀನಿವಾಸಾ

ಬಿಡೆನೋ ನಿನ್ನಂಘಿೃ  ಶ್ರೀನಿವಾಸಾ ಎನ್ನ
ದುಡಿಸಿಕೊಳ್ಳೆಲೋ ಶ್ರೀನಿವಾಸಾ
ನಿನ್ನುಡಿಯೇ ಜೀತೆಲ್ಲೊ ಶ್ರೀನಿವಾಸಾ ಎನ್ನ
ನಡೆತಪ್ಪು ಕಾಯೋ ಶ್ರೀನಿವಾಸಾ ।।

ಬಡಿಯೋ ಬೆನ್ನಲಿ ಶ್ರೀನಿವಾಸಾ
ಎನ್ನೊಡಲ ಹೊಯ್ಯದಿರೋ ಶ್ರೀನಿವಾಸಾ
ನಾ ಬಡವ ಕಾಣೆಲೋ ಶ್ರೀನಿವಾಸಾ
ನಿನ್ನೊಡಲ ಹೊಕ್ಕೆನೋ ಶ್ರೀನಿವಾಸಾ ।।

ಪಂಜುಪಿಡಿವೆನೋ ಶ್ರೀನಿವಾಸಾ
ನಿನ್ನೆಂಜಲ ಬಳಿದುಂಬೆ ಶ್ರೀನಿವಾಸಾ
ನಾ ಸಂಜೆ ಉದಯಕೆ ಶ್ರೀನಿವಾಸಾ
ಕಾಳ೦ಜೆಯ ಪಿಡಿವೆ ಶ್ರೀನಿವಾಸಾ ।।

ಸತ್ತಿಗೆ ಚಾಮರ ಶ್ರೀನಿವಾಸಾ 
ನಾನೆತ್ತಿಕುಣಿವೆನೋ ಶ್ರೀನಿವಾಸಾ
ನಿನ್ನ ರತ್ನದ ಹಾವಿಗೆ ಶ್ರೀನಿವಾಸಾ
ನಾ ಹೊತ್ತು ನಲಿವೆನೋ ಶ್ರೀನಿವಾಸಾ ।।

ಹೇಳಿದಂತಾಲಿಪೆ ಶ್ರೀನಿವಾಸಾ
ನಿನ್ನಾಳಿಗಳಾಗಿಹೆ ಶ್ರೀನಿವಾಸಾ
ಅವ ರೋಳಿಗವ ಮಾಳ್ಫೆ ಶ್ರೀನಿವಾಸಾ
ಎನ್ನ ಪಾಲಿಸೋ ಬಿಡದೇ ಶ್ರೀನಿವಾಸಾ ।।

ನಿನ್ನ ನಾಮ ಹೋಳಿಗೆ ಶ್ರೀನಿವಾಸಾ
ಕಳ್ಳ ಕುನ್ನಿ ನಾನಾಗಿಹೆ  ಶ್ರೀನಿವಾಸಾ
ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸಾ
ಎನಗಿನ್ನು ಲಜ್ಜೇತಕೆ ಶ್ರೀನಿವಾಸಾ ।।

ಬೀಸಿ ಕೊಲ್ಲಲವರೆ ಶ್ರೀನಿವಾಸಾ
ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸಾ
ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸಾ
ಎಂಜಲಾಸೆಯ ಬಂಟ ನಾ ಶ್ರೀನಿವಾಸಾ ।।

ಹೇಸಿ ನಾನಾದರೆ ಶ್ರೀನಿವಾಸಾ
ಹರಿ ದಾಸರೊಳು ಪೊಕ್ಕೆ ಶ್ರೀನಿವಾಸಾ
ಅವರ ಭಾಷೆಯ ಕೇಳಿಹೆ ಶ್ರೀನಿವಾಸಾ
ಆ ವಾಸಿಯ ಸೈರಿಸೊ ಶ್ರೀನಿವಾಸಾ ।।

ತಿಂಗಳವನಲ್ಲ ಶ್ರೀನಿವಾಸಾ
ವತ್ಸ ರಂಗಳವನಲ್ಲ ಶ್ರೀನಿವಾಸಾ
ರಾಜ೦ಗಳ ಸವಡಿಪೆ ಶ್ರೀನಿವಾಸಾ
ಭಾವಂಗಳ ದಾಟುವೆ ಶ್ರೀನಿವಾಸಾ ।।

ನಿನ್ನವ ನಿನ್ನವ ಶ್ರೀನಿವಾಸಾ
ನಾ ನಾನ್ಯವನರಿಯೆನು ಶ್ರೀನಿವಾಸಾ
ಅಯ್ಯಾ ಮನ್ನಿಸೊ  ತಾಯ್ತಂದೆ ಶ್ರೀನಿವಾಸಾ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸಾ ।।

ಶ್ರೀನಿವಾಸ ನೀನೆ ಪಾಲಿಸೋ

ಶ್ರೀನಿವಾಸ ನೀನೆ ಪಾಲಿಸೋ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ ।।

ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ ।।

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ (ನೀ) ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದೊಳಗೆ
ದುಷ್ಟಕಾರ್ಯ ಮಾಡಿದಾಗ್ಯೂ ಶಿಷ್ಠನಾಗಿ ಕೈಯಪಿಡಿದು ।।

ಎಂದಿಗೆ  ನಿನ್ನ ಪಾದಾಬ್ಜವ ಪೊಂದುವ ಸಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತ್ತಿಹೆನು
ಚಂದದಿಂ ಭವಾಬ್ಧಿಗೆಂದು ಬೆಂದು ನೊಂದೆನೋ ಮುಕುಂದ ।।

ಅನುದಿನ ಅನೇಕ ರೋಗಗಳ ಅನುಭವಿಸುವೆನು
ಘನ್ನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲ ನೀ ಎನಗೆ ಒಲಿದು ।।


ರಾಗಿ ತಂದೀರಾ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ 
ಯೋಗ್ಯರಾಗಿ ಭೋಗ್ಯರಾಗಿ 
ಭಾಗ್ಯವಂತರಾಗಿ ನೀವು 

ಅನ್ನ ದಾನವ ಮಾಡುವರಾಗಿ 
ಅನ್ನ ಛತ್ರವ ನಿಟ್ಟವರಾಗಿ 
ಅನ್ಯವಾರ್ತೆಯ ಬಿಟ್ಟವರಾಗಿ 
ಅನುದಿನ ಭಜನೆಯ ಮಾಡುವರಾಗಿ 

ಮಾತಾಪಿತರನು ಸೇವಿಪರಾಗಿ 
ಪಾಪ ಕಾರ್ಯವ ಬಿಟ್ಟವರಾಗಿ 
ಖ್ಯಾತಿಯಲಿ ಮಿಗಿಲಾದವರಾಗಿ 
ನೀತಿ ಮಾರ್ಗದಲಿ ಖ್ಯಾತರಾಗಿ ।।

ಗುರು ಕಾರುಣ್ಯವ ಪಡೆದವರಾಗಿ 
ಗುರುವಿನ ಮರ್ಮವ ತಿಳಿದವರಾಗಿ 
ಗುರುವಿನ ಪಾದವ ಸ್ಮರಿಸುವರಾಗಿ 
ಪರಮಪುಣ್ಯವ ಮಾಡುವರಾಗಿ ।।

ಶ್ರೀನಿವಾಸನ ಸ್ಮರಿಸುವರಾಗಿ 
ಪ್ರಾಣರಾಯನ ದಾಸರಾಗಿ 
ದಾನಕೆಂದು ಹೆದರಿದವರಾಗಿ 
ಧೀನ ವೃತ್ತಿಯಲಿ ಹೀನರಾಗಿ ।।

ಪಕ್ಷಮಾಸ ವ್ರತ ಮಾಡುವರಾಗಿ 
ಪಕ್ಷಿವಾಹನಗೆ ಪ್ರೀಯರಾಗಿ 
ಕುಕ್ಷಿಲಿ ಕಲ್ಮಶ ಇಲ್ಲದವರಾಗಿ 
ಭಿಕ್ಷಕರು ಅತಿ ತುಚ್ಛರಾಗಿ ।।

ಕಾಮಕ್ರೋಧಗಳ ಅಳಿದವರಾಗಿ 
ನೇಮ ನಿಷ್ಠೆಗಳ ಮಾಡುವರಾಗಿ 
ಆ ಮಹಾ ಪದದಲಿ ಸುಖಿಸುವರಾಗಿ 
ಪ್ರೇಮದಿ ಕುಣಿ ಕುಣಿದಾಡುವರಾಗಿ ।।

ಸಿರಿರಮಣನ ಸದಾ ಸ್ಮರಿಸುವರಾಗಿ 
ಗುರುತಿಗೆ ಬಾಹೋ ರಂಥವರಾಗಿ 
ಕರೆ ಕರೆ ಸಂಸಾರ ನೀಗುವರಾಗಿ 
ಪುರಂದರ ವಿಠ್ಠಲನ ಸೇವಿಪರಾಗಿ ।।

Sunday, 15 March 2020

ಬಾರೋ ಗುರು ರಾಘವೇಂದ್ರ

ಬಾರೋ ಗುರು ರಾಘವೇಂದ್ರ । ಬಾರಯ್ಯ ಬಾ ಬಾ ।।

ಹಿಂದು  ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು ।।

ಸೇವಕನೆಲೂ ನಾನು ಧಾವಿಸಿ ಬಂದೆನು ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ ।।

ಕರೆದರೆ ಬರುವಿಯಂದು ಸಾರುವುದು ಡಂಗುರ ತ್ವರಿತದಿ
ಒದಗೊ ಬಂಧು । ಜರಿಯ ಬೇಡವೋ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ ।ಹರಿಯ ಸ್ಮರಣೆಯ
ನಿರುತದಾಳಿ ಏನ ಹರುಷದಲಿ ನೀ ನಿರುತ ಕೊಡುತಲಿ ।।

ನರಹರಿ ಪ್ರಿಯನೆ ಬಾರೊ । ಗುರುಶ್ರೀಶವಿಠಲನೆ 
ಕರುಣಪಾತ್ರನೇ ಬೇಗ ಬಾ ।। ಗುರುವಾರಣೆ ಪರಿಪೋಷಿಸೆನ್ನನು
ಮರೆಯದಲೆ  ತವಚರಣ ಕೋಟೆಯ । ಲಿರಿಸಿ ಚರಣಾ೦ಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ।।



ಏನಗೂ ಆಣೆ ರಂಗ ನಿನಗೂ ಆಣೆ

ಏನಗೂ ಆಣೆ ರಂಗ ನಿನಗೂ ಆಣೆ
ಏನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।

ನಿನ್ನ ಬಿಟ್ಟು ಅನ್ಯರ ಭಜಿಸಿದರೆನೆಗೆ ಆಣೆ ರಂಗ ।
ಎನ್ನ ನೀ ಕೈ ಬಿಟ್ಟು ಹೋದರೆ ನಿನಗೆ ಆಣೆ ।।

ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ।।

ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ।।

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।

ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ ।।

ಪವಮಾನ ಜಗದ ಪ್ರಾಣ

ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯದಹನ (ಪವನ)
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿಕೊಡು ಕವಿಜನ ಪ್ರಿಯಾ ।।

ಹೇಮಕಚ್ಚುಟು ಉಪವೀತಧರಿಪ ಮಾರುತ । ಕಾಮಾದಿವರ್ಗ ರಹಿತ ।
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ । ರಾಮಚಂದ್ರನ ನಿಜದೂತ
ಯಾಮಯಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಡಿಪುದು ।।

ವಜ್ರಶರೀರ ಗಂಭೀರ ಮುಕುಟಧರ । ದುರ್ಜನವನ ಕುಠಾರ ।।
ನಿರ್ಜರ ಮಣಿದಯಾ ಪರಾವಾರ ಉದಾರ ।
ಸಜ್ಜನರಘಪರಿಹಾರ ಅರ್ಜುನಗೊಲಿದೊಂದು ಧ್ವಜವಾನಿಸಿನಿಂದು ।
ಮೂರ್ಜಗವರಿವಂತೆ ಗರ್ಜನೆ ಮಾಡಿದಿ ।।
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ।
ಮಾರ್ಜನದಲಿ ಭವ ವರ್ಜಿತನೆನೆಸಿತೊ ।।

ಪ್ರಾಣ ಅಪಾನ ವ್ಯಾನೋದಾನ ಸಮಾನ । ಆನಂದ ಭಾರತೀರಮಣ ।।
ನೀನೇ ಸರ್ವಾದಿ ಗೀರ್ವಾಣದ್ಯರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲ್ಲಿ ಏನೆೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನು
ಪ್ರಾಣನಾಥ ಸಿರಿವಿಜಯವಿಠ್ಠಲನ ।। ಕಾಣಿಸಿ ಕೊಡುವುದು ಭಾನುಪ್ರಕಾಶ ।।





ಏನು ಧನ್ಯಳೋ ಲಕುಮಿ

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ।।

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ್ನ ಸೇವೆ
ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಠಳಾಗಿ ಮಾಡುತಿಹಳು ।।

ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲಿ ನಿಂತು
ಚಿತ್ರ ಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ।।

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ
ಗರುಡಗಮನನಾದ ಪುರಂದರ ವಿಠ್ಠಲನ್ನ ಸೇವಿಸುವಳು ।।

ಮೂರು ಜಗವ ಕುಣಿಸಿದಂತ

ಮೂರು ಜಗವ ಕುಣಿಸಿದಂತ ಗಾರುಡಿಗೈವ  ಯಾರಕ್ಕ ।।
ಯಾರಕ್ಕ ಇವ ಯಾರಕ್ಕ ।।

ನಾರಾಯಣನಲ್ಲವೇನು ಅಣ್ಣಾ ಕೇಳೆ ತಮ್ಮ ।

ಧರೆಯ ಸುರುಳಿ ಸುತ್ತಿದಂಥ ಅರಸು ಇವ ಯಾರಕ್ಕ ।
ಮಧುರಾ ಪುರದಿ ಕದನವ ನಿಟ್ಟಿದಾ
ವರಹಾವತಾರ ಕೇಳ್ ತಂಗಿ (ಇವ) ।।

ಕುದುರೆಯ ಮೇಲೆ ಎದುರಿಗೆ ಬರುವ
ಚೆಲುವಾ ಇವ ಯಾರಕ್ಕ ಇವ ಯಾರಕ್ಕ ।।
ಅರಿಯದ ಭಕುತರ ಮೊರೆಯನೆ ಕೇಳ್ದ
ಕಲ್ಕ್ಯಾವತಾರ ಕೇಳ್ ತಂಗಿ (ಇವ) ।।

ಇಂದು ವದನ ಸುಂದರ ಮೂರುತಿ
ಗೋವಿಂದ ಇವ ಕಾಣಕ್ಕ ।।
ನಂದನ ಕಂದ ಹೆಳವನ ಕಟ್ಟೆಯ
ರಂಗ ಇವ ಕಾಣಕ್ಕ
ಹೆಳವನ ಕಟ್ಟೆಯ ರಂಗ ಕಾಣಕ್ಕ ।।



ಪಾಲಿಸೆ ಎನ್ನನು ಗೌರಿ

ಪಾಲಿಸೆ ಎನ್ನನು ಗೌರಿ ।।
ಪಾಲಿಸೆ ನಿನ್ನಯ ಪಾಲಿಗೆ ಬಂದೆನು
ಬೀಳುವೆ ಸರ್ವದ ಕಾಲಿಗೆ ಕರುಣದಿ

ಶರಣೆಂದವರನು ಪೊರೆವಳುಯೆ೦ಬುವ
ಬಿರುದು ನಿನ್ನದು ಎಂದು ಅರಿತೆನು ಕರುಣದಿ ।।

ಸನ್ಮತ ಪುರುಷನ ಇನ್ನೆಲಿ ಕಾಣೆನು
ಮನ್ಮಥನೆಂಬುವ ಬನ್ನ ಬಡಿಪ ಬಲು ।।

ಕಾಣೆನು ಶಾಂತಿಯ ಏನೆಂದು ಹೇಳಲಿ
ಪ್ರಾಣೀಶ ವಿಠ್ಠಲನು ತಾನೆ ಬಲ್ಲನು ತಾಯೆ ।।

ಹೂವ ತರುವರ ಮನೆಗೆ ಹುಲ್ಲ ತರುವ

ಹೂವ ತರುವರ ಮನೆಗೆ ಹುಲ್ಲ ತರುವ
ಆವಾ ಲಕುಮಿರಮಣ ಇವಗಿಲ್ಲ ಗರುವ

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು
ಇಂದಿರಾರಮನಿಗೆ ಅರ್ಪಿತವೆನ್ನಲು ।
ಒಂದೇ ಮನಸಿನಿಂದ ಸಿಂಧುಶಯನಾಯನೇ
ಎಂದೆಂದಿಗು ವಾಸಿಪನು ಎನ್ಮ೦ದಿರದೊಳು ।।

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ ।
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನರಮನೆಯೊಳಗೆ ।।

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಿನಿಸಿದ ।
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡರಾಗಿ ಸಂಚರಿಸುವವ ।।

ನಾರಸಿಂಹನೆಂಬೋ ದೇವನು

ನಾರಸಿಂಹನೆಂಬೋ ದೇವನು ನಂಬಿದಂಥ 
ನರರಿಗೆಲ್ಲ ವರವ ಕೊಡುವನು 

ಓಂ ನಮಃ ಶಿವಾಯ ಎನುತಲಿ 
ಅಸುರ ತನ್ನ ಸುತನ ಕರೆದು ತೋರಿಸೆಂದನು 
ನರಹರಿಯ ನಾಮವನ್ನು ನಸುನಗುತಲೆ ಬರೆಯುತಿರಲು 
ಎಡೆದ ತೊಡೆಯಲಿದ್ದ ಶಿಶುವ ಧರೆಗೆ ಬಡಿದು ನೂಕಿದಾನು 

ಅಂಬುಧಿಯೋಳ್ ಮಗನ ಮಲಗಿಸಿ ಮೇಲೆ ದೊಡ್ಡ 
ಬೆಟ್ಟವನ್ನು ಇತ್ತು ಬನ್ನಿರೋ 
ಹರಿಯ ಕೃಪೆಗೆ ಪಾತ್ರನಾದ ತರುಣನೆಂದು ವರುಣದೇವ 
ಮರಣವಿಲ್ಲದ್ಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದಾನೋ 

ಸುತ್ತು ಜನರನೆಲ್ಲಾ ಕರೆಸಿದಾ ಅಸುರ ತನ್ನ 
ಸುತನ ಕೊಳಿಸಬೇಕು ಎನುತಲಿ 
ಅಟ್ಟಡಿಗೆಯಲ್ಲಿ ವಿಷವ ಅಷ್ಟು ಭೋಜನಂಗಳ ಮಾಡಿ 
ಅಷ್ಟು ವಿಷದ ಪದಾರ್ಥಗಳನ್ನು ಭುಂಜಿಸಿ ಕುಳಿತ ಗಟ್ಟಿಯಾಗಿ 

ಬೆಟ್ಟವನ್ನು ಹತ್ತಿ ಉರುಳಿಸಿ ಅಸುರ ತನ್ನ 
ಪಟ್ಟದಾನೆ ಕೈಲಿ ಮೆಟ್ಟಿಸಿ 
ಹರಳುಮನೆಯ ಮಾಡಿ ಸುಟ್ಟು ಹುಲಿಯ ಬೋನಿನೊಳಗೆ ಇಟ್ಟು 
ಯತನವಿಲ್ಲದೆ ಸುತನ ಕೊಳಿಸ ಶಕ್ತನಿಲ್ಲದೆ ಪೋದ 

ನಿನ್ನ ಹರಿಯು ಇದ್ದ ಎಡೆಯಲಿ ಅಸುರ ತನ್ನ ಸುತನ 
ಕರೆದು ತೋರಿಸೆಂದನು 
ಎನ್ನ ಹರಿಯು ಇಲ್ಲದೆಡೆಯು ಇರುವುದುಂಟೆ ಲೋಕದಲ್ಲಿ 
ಈ ಕಂಭದಲ್ಲಿ ಇಹನು ಎಂದು ಕೈಯ ಮುಗಿದು ತೋರಿದಾನು 

ವಜ್ರ ಕಂಭವನ್ನು ಒದೆಯಲು ಹರಿಯು ತನ್ನ 
ಉಗ್ರಕೋಪವನ್ನು ತಾಳಿದ 
ಕಟಕಟೆಯ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ 
ಕರಳು ಮಾಲೆಯನ್ನು ತೆಗೆದು ಕೊರಳು ಮಾಲೆ ಹಾಕಿದಾನು 

ಅಂತರಿಕ್ಷದಲ್ಲಿ ಅಮರರು ನೋಡಿ ಆಗ 
ಪುಷ್ಪವೃಷ್ಟಿಯನ್ನೆ ಕರೆದರು 
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು 
ಅಮರಪತಿಯರೆಲ್ಲ ಕೂಡಿ ಅಂಜಬೇಡಿದರೆಂಭಯವಿತ್ತು 

ಲಕ್ಷ್ಮೀನಾರಸಿಂಹ ಚರಿತ್ರೆಯಾ ಸ್ತುತಿಸಿದ  ಹೇಳಿಕೇಳಿದ ಮನುಜರಿಗೆ 
ಅಷ್ಟ ಭಾಗ್ಯಗಳನ್ನು ಕೊಟ್ಟು ಪುತ್ರಸಂತಾನ 
ಭಕ್ತಿಯಿಂದಲೆ ಮುಕ್ತಿ ಕೊಡುವ 
ಭಕ್ತವತ್ಸಲ ಪುರಂದರವಿಠ್ಠಲ