ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು
ಅನ್ನ ದಾನವ ಮಾಡುವರಾಗಿ
ಅನ್ನ ಛತ್ರವ ನಿಟ್ಟವರಾಗಿ
ಅನ್ಯವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
ಮಾತಾಪಿತರನು ಸೇವಿಪರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಖ್ಯಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ ।।
ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮಪುಣ್ಯವ ಮಾಡುವರಾಗಿ ।।
ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾನಕೆಂದು ಹೆದರಿದವರಾಗಿ
ಧೀನ ವೃತ್ತಿಯಲಿ ಹೀನರಾಗಿ ।।
ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರೀಯರಾಗಿ
ಕುಕ್ಷಿಲಿ ಕಲ್ಮಶ ಇಲ್ಲದವರಾಗಿ
ಭಿಕ್ಷಕರು ಅತಿ ತುಚ್ಛರಾಗಿ ।।
ಕಾಮಕ್ರೋಧಗಳ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ಆ ಮಹಾ ಪದದಲಿ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ ।।
ಸಿರಿರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋ ರಂಥವರಾಗಿ
ಕರೆ ಕರೆ ಸಂಸಾರ ನೀಗುವರಾಗಿ
ಪುರಂದರ ವಿಠ್ಠಲನ ಸೇವಿಪರಾಗಿ ।।
No comments:
Post a Comment