Saturday 8 August 2020

ಪೋಪು ಹೋಗೋಣ ಬಾ

 ಪೋಪು ಹೋಗೋಣ ಬಾ ರಂಗಯ್ಯ ರಂಗ 

 ಪೋಪು ಹೋಗೋಣ ಬಾ ।।


ಜಾನ್ಹವಿಯ ತೀರವಂತೆ ಜನಕರಾಯನ ಕುವರಿಯಂತೆ 

ಜಾನಕಿ ವಿವಾಹವಂತೆ ಜಾಣ ನೀನು ಬರಬೇಕಂತೆ ।।


ಕುಂಡನೀಯ ನಗರವಂತೆ ಭೀಷ್ಮಕರಾಯನ ಕುವರಿಯಂತೆ 

ಶಿಶುಪಾಲ ನೊಲ್ಲಳಂತೆ ನಿನಗೆ ಓಲೆ ಬರೆದಳಂತೆ ।।


ಕೌರವರು ಪಾಂಡವರು ನೆತ್ತವಾಡಿ ಸೋತರಂತೆ 

ರಾಜ್ಯವನ್ನೆ ಬಿಟ್ಟರಂತೆ ರಂಗವಿಠಲ ಬರಬೇಕಂತೆ ।।


ಸತ್ಯ ಜಗತಿದು ಪಂಚಭೇದವು

 ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ 

ಕೃತ್ಯವರಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ।।

 

ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು 

ಜೀವ ಜಡ ಜಡ ಜಡಕೆ ಭೇದ ಜೀವ ಜಡ ಪರಮಾತ್ಮಗೆ ।।

 

ಮಾನುಷೋತ್ತಮಗಧಿಪ ಕ್ಷಿತಿಪರು ಮನುಜ ದೇವ ಗಂಧರ್ವರು 

ಜ್ಞಾನಪಿತ್ರಜಾನ ಕರ್ಮಜ ದಾನವಾರಿ ತತ್ವಾತ್ಮರು ।।

 

ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣನು 

ಇನಜಗೆ ಸಮ ಸೂರ್ಯ ಚಂದ್ರರು ಮನುಸುತೆಯು ಹೆಚ್ಚು ಪ್ರವಹನು ।।

 

ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಯಾ೦ಭುವರಾರ್ವರು 

ಪಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು ।।

 

ದೇವೇಂದ್ರನಿಗಿಂತ ಅಧಿಕ ಮಹರುದ್ರ ದೇವ ಸಮ ಶೇಷ ಗರುಡರು 

ಕೇವಲಧಿಕರು ಶೇಷಗರುಡಗೆ ದೇವಿ ಭಾರತಿ ಸರಸ್ವತಿ ।।

 

ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು 

ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕಶಕ್ತಳು ಶ್ರೀ ರಮಾ ।।

 

ಅನಂತ ಗುಣದಿ೦ ಲಕುಮಿಗಧಿಕನು ಶ್ರೀಪುರಂದರವಿಠಲನು 

ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ ।।

 

  

ಆರುತಿ ಬೆಳಗೋಣ ಬಾರೇ

ಆರುತಿ ಬೆಳಗೋಣ ಬಾರೇ ಶ್ರೀಹರಿಗೆ ॥

ಆರುತಿ ಬೆಳಗೋಣ ವಾರಿಜ ನಾಭಗೇ

ನಾರಿಯರೆಲ್ಲರೂ ತೀವ್ರದಿ೦ದಲಿ । ಮುತ್ತಿನಾರುತಿ 

ಬೆಳಗೋಣ ಬಾರೇ ॥


ಮತ್ಸ್ಯ ಕೂರ್ಮನಿಗೆ ಸ್ವಚ್ಛವರಹನಿಗೆ ॥

ವತ್ಸ ಪ್ರಹ್ಲಾದನ ಸಲಹಿದ ನರಹರಿಗೆ ॥

 

ಪುಟ್ಟವಾಮನನಿಗೆ ದಿಟ್ಟ ಭಾರ್ಗವನಿಗೆ 

ಶಿಲೆಯನುದ್ಧರಿಸಿದ  ಶ್ರೀ ರಾಮಚ೦ದ್ರಗೇ ॥


ಉಧ್ಭವ ಸಖನಿಗೆ ಮುದ್ದು ಕೃಷ್ಣನಿಗೆ ॥

ಬೌದ್ಧಾವತಾರ ತಾಳ್ದ ಮುದ್ದು ಹಯವದನಗೆ ॥


Saturday 27 June 2020

ಬೃಂದಾವನದಿ ಕೊಳಲನೂದಲಿಲ್ಲವೇ

ಬೃಂದಾವನದಿ ಕೊಳಲನೂದಲಿಲ್ಲವೇ 
ಅಂದು ಗೋಪಿಯರನ್ನು ಕರೆಯಲಿಲ್ಲವೆ ।।
ಇಂದೇಕೆ ಮರೆತೆಯೋ ಮಾಧವ ರಾಧಮಾಧವ ವೇಣಿ ಮಾಧವ 
ಬಂದು ನೀ ಎನ್ನ ಕಾಯೋ ಕೇಶವ ।।

ನೀರೊಳು ನೀ ಆಟವಾಡಲಿಲ್ಲವೇ 
(ನೀ) ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ 
(ನೀ) ಪೋರನ ಮಾತಿಗೆ ಪೊಗಲಿಲ್ಲವೇ (ಕೃಷ್ಣ) ।।

ಪೊಡವೀಯ ದಾನವ ಬೇಡಲಿಲ್ಲವೇ 
(ನೀ) ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ 
(ನೀ) ಕಡಗೋಲ ಕೈಯಲ್ಲಿ ಪಿಡಿಯಲಿಲ್ಲವೇ (ಕೃಷ್ಣ)।।

ಬತ್ತಲೆ ಬೌದನಾಗಿ ತಿರುಗಲಿಲ್ಲವೇ
(ನೀ) ಉತ್ತಮ ತೇಜಿಯನ್ನೇರಲಿಲ್ಲವೇ ।
ಹತ್ತಾವತಾರವ ತೋರಲಿಲ್ಲವೇ 
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ (ಕೃಷ್ಣ) ।।


ನಿನ್ನ ನಂಬಿ ಬಂದೆ

ನಿನ್ನ ನಂಬಿ ಬಂದೆ ಎನ್ನ ಕೈಬಿಡಬೇಡ ಘನ್ನ 
ಮಹಿಮನೆ ಶ್ರೀನಿವಾಸ ।।

ಪನ್ನಗ ಶಯನ ಪನ್ನ ರಕ್ಷಕ । ಪ್ರಸನ್ನನಾಗೋ 
ಬೇಗ ಶ್ರೀನಿವಾಸ ।।

ಜನನಿ ಜನಕನೆ ಶ್ರೀನಿವಾಸ । ಎನ್ನನುಭಂದಿಯು 
ನೀನೇ ಶ್ರೀನಿವಾಸ ।।
ಜನುಮಜನುಮದೊಳು ಶ್ರೀನಿವಾಸ 
ಎನ್ನನುದ್ಧರಿಸುವವನೇ ಶ್ರೀನಿವಾಸ ।।

ದೇಶದೇಶವತಿರುಗಿ ಶ್ರೀನಿವಾಸ ಬಹು 
ಕ್ಲೇಶ ಪಟ್ಟಿರುವೆನು ಶ್ರೀನಿವಾಸ ।।
ಆಶಾ ಪಾಶವ ಬಿಡಿಸೋ ಶ್ರೀನಿವಾಸ 
ನಿನ್ನದಾಸರ ಸಂಗಕೊಡೋ ಶ್ರೀನಿವಾಸ ।।

ಬಂಧನವ ಕೊಡುವವನೆ ಶ್ರೀನಿವಾಸ 
ಭವ ಬಂಧನವ ಬಿಡಿಸುವವನೆ ಶ್ರೀನಿವಾಸ ।।
ಅಂದು ನೀನೆ ಇಂದು ನೀನೆ ಶ್ರೀನಿವಾಸ 
ಎಂದೆಂದೆಂದಿಗೂ ನೀನೆ ಶ್ರೀನಿವಾಸ ।।

ಹೃದಯದಲ್ಲಿ ನಿನ್ನ ರೂಪ ಶ್ರೀನಿವಾಸ 
ಎನ್ನ ವದನದಲ್ಲಿ ನಿನ್ನ ನಾಮ ಶ್ರೀನಿವಾಸ ।।
ಸದಯನಾಗಿ ಎನಗೆ ಒಲಿದು ಶ್ರೀನಿವಾಸ 
ನೀನು ಒದಗಿ ಬಂದು ಪಾಲಿಸಯ್ಯ ಶ್ರೀನಿವಾಸ ।।

ಜಲ್ಲಡಿಯ ನೆರಳಿನಂತೆ ಶ್ರೀನಿವಾಸ 
ಬಹು ತಲ್ಲಣವಗೊಳಿಸುವವನೆ ಶ್ರೀನಿವಾಸ ।।
ಬಲ್ಲವರು ಯಾರಯ್ಯ ಶ್ರೀನಿವಾಸ 
ಸಿರಿವಲ್ಲಭನೆ ಎನ್ನ ತಂದೆ ವೆಂಕಟೇಶ ।।


Friday 26 June 2020

ಗೋಪಿ ಕೇಳ್ ನಿನ್ನ ಮಗ

ಗೋಪಿ ಕೇಳ್ ನಿನ್ನ ಮಗ ಜಾರ ಅವ  ಚೋರ ಸುಕುಮಾರ ।

ಮುದದಿ ಮುಕುಂದ ಸದಸದನಕ್ಕೆ ಬಂದ ದಧಿಯ
ಮೀಸಲು ತಿಂದ ಅವತಿಂದ ನಿನ್ನ ಕಂದಾ ।।

ಮಾರನ ಪಿತ ತಾ ಮನೆಯೊಳು ಹೊಕ್ಕ ಹಿಡಿಯ |
ಹೋದರೆ ಆವ ಸಿಕ್ಕ ಅವನಕ್ಕ ಭಾರಿ ಠಕ್ಕ ।।

ಹರೆಯದ ಪೋರಿ ಜರದ ಕೆಂಗೋರಿ । ಭರದಿಂದ 
ಸೀರೆಯ ಸೆಳೆದ ಕರಪಿಡಿದ ಮಾನ ಕಳೆದಾ ।।

ಭಾಳದಿನವಾಯಿತು ಹೇಳುವುದ್ಹಾ೦ಗೆ । ಗೋಪಾಲನ 
ಮನಸು ಒಮ್ಮೆ ಹಾಂಗೆ ಒಮ್ಮೆ ಹಿಂಗೆ । ಹೇಳಲಾಹ್೦ಗೆ ।।

ರಾಧೆಯ ಮನದ ಮೋದ ಮುಕುಂದ । ಶ್ರೀದವಿಠ್ಠಲನಾಟ 
ಚೆಂದ ನಯನನಂದ ನಿನ್ನ ಕಂದಾ ।।



Monday 27 April 2020

ರಾಘವೇಂದ್ರ ಗುರು ರಾಯರ ಸೇವಿಸಿರೋ

ರಾಘವೇಂದ್ರ ಗುರು ರಾಯರ ಸೇವಿಸಿರೋ । ಸೌಖ್ಯದಿ ಜೀವಿಸಿರೋ
ತುಂಗಾ ತೀರದಿ ರಘುರಾಮನ ಪೂಜಿಪರೋ । ನರಸಿಂಗನ ಭಜಕರೋ

ಶ್ರೀಸುಧೀಂದ್ರಕರ ಸರೋಜ ಸಂಜಾತ । ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ ದುರ್ಮತವನು ಜೈಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ  ಕರುಣೀ ।।

ಕು೦ದದ ವರಮಂತ್ರಾಲಯದಲ್ಲಿರುವ । ಕರೆದಲ್ಲಿಗೆ ಬರುವ
ವೃಂದಾವನ ಗತ ಮೃತ್ತಿಗೆ ಜಲಪಾನಾ । ಮುಕ್ತಿಗೆ ಸೋಪಾನ
ಸಂದರುಶನ ಮಾತ್ರದಲ್ಲಿ ಮಹತ್ಪಾಪ ಪರಿದೋಡಿಸಲಾಪ
ಮಂದಭಾಗ್ಯರಿಗೆ ದೊರಕದಿರುವ ಸೇವಾ ಶರಣರ ಸಂಜೀವಾ ।।

ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸುವ ಮಾತ್ರ
ಮೋದ ಬಡಿಸುತಿಹ ತಾನಿಹ ಪರದಲ್ಲಿ ಈತಗೆ ಸರಿ ಎಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿ ಯೆಲ್ಲೆನ್ನಾಣೆ
ಪಾದಸ್ಮರಣೆಯ ಮಾಡದವನೇ ಪಾಪಿ ನಾ ಪೇಳ್ವೆನು ಸ್ಥಾಪಿ ।।